ಚತುರ್ವಿಧ ಸಾಧನಗಳು

ಅರಿಷಡ್ವರ್ಗಗಳನ್ನು (ನೋಡಿ- ಅರಿಷಡ್ವರ್ಗ) ಗೆದ್ದು ಬ್ರಹ್ಮಜ್ಞಾನ ಪಡೆಯಲು ಸಹಾಯುಕವಾಗಿರುವ ನಾಲ್ಕು ಸಾಧನಗಳು. 1. ನಿತ್ಯಾನಿತ್ಯವಸ್ತುವಿವೇಕ-ನಿತ್ಯವಾದ ವಸ್ತು ಯಾವುದು ಅನಿತ್ಯವಾದದ್ದು ಯಾವುದು ಎಂದು ವಿವೇಚಿಸಿ ತಿಳಿಯುವುದು. 2. ಇಹಾಮುತ್ರ ಫಲಭೋಗ ವಿರಾಗ-ಈ ಲೋಕದಲ್ಲಿ ಹಾಗೂ ಪರಲೋಕದಲ್ಲಿ ಕರ್ಮಫಲಗಳನ್ನು ಅನುಭವಿಸುವ ಬಯಕೆ ತೊರೆಯುವುದು; 3. ಶಮ (ಮನಸ್ಸಿನ ಹತೋಟಿ), ದಮ (ಬಾಹ್ಯೇಂದ್ರಿಯಗಳ ಹತೋಟಿ). ಉಪರತಿ (ಎಲ್ಲ ಕರ್ಮಗಳನ್ನೂ ಬಿಟ್ಟು ಶಾಂತಸ್ಥಿತಿಯಲ್ಲಿರುವಿಕೆ). ತಿತಿಕ್ಷಾ (ಹಸಿವು, ಬಾಯಾರಿಕೆ, ಶೀತೋಷ್ಣ ಮೊದಲಾದ ದ್ವಂದ್ವಗಳನ್ನು ಗೆಲ್ಲುವುದು). ಸಮಾಧಾನ (ಮನಸ್ಸಿನ ಏಕಾಗ್ರತೆ), ಶ್ರದ್ಧಾಭಕ್ತಿ-ಈ ಆರು ಗುಣಗಳನ್ನು ಸಂಪಾದಿಸುವುದು; 4 ಮುಮುಕ್ಷುತ್ವ-ಮೋಕ್ಷ ಪಡೆಯುವ ಇಚ್ಛೆ. ಇವನ್ನು ಸಾಧನಚತುಷ್ಟಯ ಎಂದೂ ಕರೆಯುತ್ತಾರೆ.
(ಆರ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ